Wednesday, April 2, 2008

ಕೊಡಚಾದ್ರಿಗೊಮ್ಮೆ...

ಅದು ಅವತ್ತು ಕೊಪ್ಪಕ್ಕೆ ಹೋಗಿ ಬಂದ ನಂತರದ ದಿನ.. ಸುಮ್ಮನೆ ಬೆಳಿಗ್ಗೆ ಹೀಗೇ wish ಮಾಡುವಾಗ ಹೇಳಿದ್ದೆ ಜೋಷಿಯವರಿಗೆ trekkingಗೆ ಹೋಗಿದ್ದೆ ಚೆನ್ನಾಗಿತ್ತು ಅಂತ.. ಅವರು ಲೋಕಾರೂಢಿಯಾಗಿ ಆಡಿದ್ದರು.. trekking ಒಳ್ಳೆಯ ಹವ್ಯಾಸ.. ರತ್ನಗಿರಿಗೆ ಹೋಗಿದ್ದೀಯ?.. ಒಳ್ಳೆ ಹೇಳಿಮಾಡಿಸಿದ ಜಾಗ ಅದು ಅದಕ್ಕೆ ಅಂತ... ಮಾತುಗಳ ಸುಮಾರು ಎರಡು ತಿಂಗಳುಗಳ ಬಳಿಕ, ಕವಿತಾಳು ತನ್ನ wedding anniversary ಸಿಹಿ ಹಂಚುವ ಸಂದರ್ಭದಲ್ಲಿ ಹೇಳಿದರು ಅವರು, ಹೇ ಕೊಡಚಾದ್ರಿಗೆ ಟ್ರೆಕ್ಕಿಂಗ್ ಹೋಗೊ ಪ್ಲಾನಿದೆ.. ಟೆಂತ್ ಫ್ಲೋರಲ್ಲಿ ರವಿ ಅಂತ ಇದಾನೆ .. ಫೋನ್ ಮಾಡಿ ಹೇಳು ನೀ ಬರೋದಾದ್ರೆ .. ನಾನು ಆಗಲಿ ಎಂದು ಸುಮ್ಮನಾಗಿದ್ದೆ ಕಾಫೀ ಸುರುವುತ್ತ... ಇದಾಗಿತ್ತು ನಾನು 'ಹೆಜ್ಜೆ-'ರೊಂದಿಗೆ ಚಾರಣಕ್ಕೆ ಹೋಗಲು ಪೀಠಿಕೆ.

ನಂತರ ಸಿದ್ಧವಾದವು ದಿನಗಳು.. ಶುಕ್ರವಾರ ಸಂಜೆ ಹೊರಟು ಭಾನುವಾರ ರಾತ್ರಿ ಮರಳುವುದು ಎಂದು. ಮೈಸೂರು ಮೋಹನ್ ಬಳಿ ನನ್ನ ಹೋಗುವಿಕೆಯನ್ನ ಖಾತ್ರಿ ಮಾಡಿಸಿದೆ.. ನೋಡಿದೆ ಸುಮಾರು ಮೂವತ್ತು ಹೆಸರುಗಳಿದ್ದವು.. ತುಂಬಾ ಅಪರಿಚಿತವಾದವುಗಳು.ಗುರುವಾರದಿಂದಲೆ ಅಲ್ಲಲ್ಲಿ ಕೇಳಿಬರುತ್ತಿದ್ದವು ಚಾರಣದ ತಯ್ಯಾರಿ ಬಗೆಗಿನ ಗುಸು ಪಿಸು ಮಾತುಗಳು ಅಕ್ಕ ಪಕ್ಕ ಹಿಂದೆ.. ರಾಜಣ್ಣ Email ಕಳುಹಿಸಿದರು tentative planನೊಂದಿಗೆ. ಇತ್ತದರಲ್ಲಿ ನನ್ನ pick up ಸಮಯ ಸಂಜೆ ಆರು ಅಂತ!. ಯೋಚನೆ ಬಂತು.. ಅದು ಹೆಂಗಪಾ? ನಾಲ್ಕಕ್ಕೆ ಕಂಪನಿ ಬಿಟ್ಟರೂ ಮಹಾಲಕ್ಶ್ಮಿ ಲೇಔಟ್ ತಲುಪೋಕಾಗೋದು ಆರೂವರೆ ಆಗುತ್ತೆ ಅಂತ. ಹಿಂದೆ ತಿರುಗಿ ಹೇಳ್ದೆ ಕವಿತಾಗೆ ಇದನ್ನ.. ಫೋನ್ ಮಾಡಿ ಸಮಯ ಸ್ಠಳ ಬದಲಿಸೋದು ಅಂತಾಯ್ತು, ಹಾಗೇನೆ ಆಯ್ತು
.

ಕಂಪನಿಯಿಂದ ನಾಲ್ಕಕ್ಕೆ ಹೊರಟು ರೂಮ್ ತಲುಪಿ ಶುರುಮಾಡಿದೆ ಅವಸವಸರವಾಗಿ packing. ಕಂಪ್ಯೂಟರ್ನಲ್ಲಿ ಹಾಡಾಕಿ ಸ್ನಾನ ಮಾಡಿದೆ ಕೇಳುತ್ತ... ಹಾಡುತ್ತ... ಹಾಗೇ ಸ್ವಲ್ಪ ಸಮಯದ ವಿಶ್ರಾಮದ ನಂತರ ಗಂಟೆ ಏಳೂವರೆಯಾಗಿತ್ತು. ಭುಜಕ್ಕೆ bag ಏರಿಸಿ ಹೊರಟೆ ವಿಜಯನಗರದ ಮಾರುತಿ ಮಂದಿರ ಬಳಿಯ ನಿರ್ಧರಿತ pick up ಸ್ಥಳಕ್ಕೆ. ಹಾಗೆಯೆ ಬ್ಯಾಗ್ ಸೇರಿದ್ದರು ಇಬ್ಬರು ವಿಜಯ್ ಮಲ್ಯ ಪುತ್ರಿಯರು.. ಬಸ್ಸಿಳಿದು ನೋಡಿದೆ ಯಾವ BOSCH ಮುಖಗಳೂ ಕಾಣಸಿಗಲಿಲ್ಲ. ಫೋನ್ ಮಾಡಿದೆ ರವಿಗೆ, ಇನ್ನೊಂದು ಬದಿಯ ಬಸ್ ನಿಲ್ದಾಣದಲ್ಲಿ, ಇರುವ ಹಾಗೂ ಇನ್ನೂ ಬರುವುವರೊಂದಿಗೆ ಇರ್ರೀ, ನಮ್ಮ ಬಸ್ ಬರೋದು ಇನ್ನೊಂದ್ ನಲ್ವತ್ ಅರ್ವತ್ ನಿಮಿಷವಾಗಬಹುದೆಂದೇಳಿದರು. ಹೋದೆ ಅಲ್ಲೊಂದು ಅಪರಿಚಿತ ಆಕೃತಿ ಬ್ಯಾಗ್ ಪಕ್ಕದಲ್ಲಿ ಇಟ್ಕೊ೦ಡು ಕಾಲಲ್ಲಾಡಿಸುತ್ತ ಬೆಂಚ್ ಮೇಲೆ ಕೂತಿತ್ತು. ಆಮೇಲೆ ಅದು ನಮ್ಮ ರವಿಯ UVCE ಕಾಲೇಜ್ ಮಿತ್ರ Mr. auditor ದೇಸಾಯಿ ಎಂದು ಪರಿಚಯವಾಗುತ್ತಿರುವಾಗಲೇ Bosch canteen ಪರಿಚಿತ ಹೆಣ್ಮುಖವೊಂದು ಬಂದು ತನ್ನೆಸರು ರಮ್ಯ ಎಂದೇಳಿ ಹರಟಲು ಶುರುಮಾಡಿತ್ತು. ನಾನು ಜೋಷಿಯವರಿಗೆ ಫೋನಾಯಿಸಿ ವಿಚಾರಿಸಿದೆ ಎಲ್ಲಿದ್ದಾರೆಂದು.. ಕಾಮಾಖ್ಯದ ಬಳಿ ಇದ್ದೀವಿ ಬರೋದಿನ್ನೊಂದು ಇಪ್ಪತ್ನಿಮಿಷ ಆಗಬಹುದು ಎಂದರು. ಇನ್ಯಾರಾರು ಕೋತಿಬಂಡೆ ಸ್ಟಾಪ್ಗೆ ಬರ್ತಾರೆಂದು ಕೇಳಿದಾಗ, ಅರುಣ್ ಹೆಸರು ಹೇಳಿ ಫೋನ್ ಮಾಡಿ ಕೇಳಲೇಳಿದರು. ಕವಿತಾನ ವಿಚಾರಿಸಿದೆ ಇಸ್ಕಾನ್ ಸಮೀಪ ಆಟೋದಲ್ಲಿ ಬರುತ್ತಿರುವುದಾಗಿ ಹೇಳಿದರು. ನಂತರ ಬಂದರು ಅರುಣ್ ಆಮೇಲೆ ಕವಿತವಿನಾಶ್ ಗೂಡಿ ಪ್ರಸನ್ನ SN ರೊಂದಿಗೆ. ಕೆಲನಿಮಿಷಗಳ ನಂತರ ಬಂತು ನಾವು ಹೋಗೋ ಬಸ್ಸು ನಿತಿನ್. ಎಲ್ಲರು ಹತ್ತಿಕೂತು ಶುರುಮಾಡಿದರು ಮಾತುಕತೆಗಳನ್ನ.. ನಂತರ ಎಲ್ಲರು ತಮ್ ತಮ್ಮ ಪರಿಚಯ ಮಾಡಿಕೋಬೇಕೆಂದು ಯಾರೋ ಬಿನ್ನವಿಸಿದಾಗ ಶುರುಮಾಡಿದೆವು; ತಾನು ಪ್ರಸನ್ನ.. ಪ್ರಕಾಶ್..ಅರುಣ್.. ಅಶ್ವಿನ್.. ಸುಂದ್ರೇಶ್.. ರಮೇಶ್.. ಹರ್ಷ.. ರಮ್ಯ.. ಶ್ವೇತ.. ಪ್ರಮೋದ್.. ಕವಿತಾ.. ಅವಿನಾಶ್... ಸಜೀತ್.. ದೇಸಾಯಿ.. ಸುಘೋಷ್.. ಹಂಸ.. ಬಿಂದಿಯಾ... ವಿಕ್ರಮ್.. ಓಂ ಪ್ರಸನ್ನ.. ರಾಜೇಶ್..ಜೋಷಿ.. ಮೋಹನ್..ರವೀ... ಎಲ್ಲರು ಮಲಗಲು ನಿರ್ಧರಿಸಿ ಸೀಟಿಗೊರಗಿ ಕಣ್ಮುಚ್ಚತೊಡಗಿದರು... ನಾನು ಹಿಂದಿನ ಸೀಟೊಂದನ್ನು ಆರಿಸಿ ಕುಳಿತಿದ್ದೆ ತಂಗಾಳಿ ಸುಖಿಸುತ್ತಾ
....

ನೆಲಮಂಗಲದ ಬಳಿ ಡಾಬವೊಂದರಲ್ಲಿ ಹೊಟ್ಟೆಉಪಚಾರವಾಯಿತು. ಊಟದ ಹೊತ್ತಿನ ಮಾತಿನಲ್ಲಿ ಕೆಲವರ ಪರಿಚಯಗಳು ಹತ್ತಿರವಾಗುತ್ತಿದ್ದವು...college junior..senior.. ಇತ್ಯಾದಿ ಇತ್ಯಾದಿ ನನ್ನ ಕಿವಿಗೆ ಮುಟ್ಟಿದಂತೆ
.

ಬಸ್ಸೋಗುತ್ತಿತ್ತು ಚಾಲಕನಿಚ್ಛೆಯಂತೆ... ತೂಗುತ್ತಿತ್ತು ಮಲಗಿದ್ದವರ, ರಸ್ತೆ ತಾನಿರುವಂತೆ... ಕೆಲವು ದೊಡ್ಡ ಮಕ್ಕಳಿಗೆ ಉಯ್ಯಾಲೆ ಪ್ರಯಾಣ ನಿದ್ದೆಯನ್ನು ಕಿತ್ತು ಮಾತಾಡಿಸುತ್ತಿತ್ತು... ಕೆಲವು ನಿದ್ದೆಬಾರದವರಿಗೆ ಇವರ ಮಾತುಗಾರಿಕೆಯಿಂದ , ಅವರು ಬಾಯಿಗಳು ರೂಪಗೊಂಡಿರೋದೇ ಮಾತಾಡುವುದಕ್ಕೆ ಎಂದನಿಸಿರಬಹುದು, ಪಾಪ ಮಾತಾಡುತ್ತಿದ್ದವು ಕಷ್ಟಸುಖಗಳನ್ನು ಅವು ಕೊಟ್ಟ.. ಪಡೆದ...ಹೀಗೇ ನೀವೂಹಿಸಿಕೊಳ್ಳಲ್ಲಾಗದವುಗಳನೆಲ್ಲಾ.. ಮಾತುಗಳು ಬರಿದಾಗಿ ಮೌನ ಆವರಿಸುತ್ತಲಿತ್ತು
..

ಅರೆತೆರೆದ ಕಿಟಕಿಯಿಂದ ನುಸುನುಸುಳಿ ಬರುತ್ತಿದ್ದ ಹಿತಗಾಳಿ ಚುಂಬಿಸುತ್ತಿತ್ತೆನ್ನ ಬಿಟ್ಟುಬಿಟ್ಟು.. ಆಗಾಗ್ಗೆ. ಅನುಭವ ಇಮ್ಮಡಿಯಾಯಿತು ಕರೆತಂದವರು ಒಳಸೇರಿದಾಗ! ಇರ್ವರು ,ಕೆಲವರಿಗೆ ಈರ್ಷೆಯನ್ನು.. ಕೆಲವರಿಗೆ ಸಿಟ್ಟನ್ನು.. ಅಸಹ್ಯವನ್ನು ಬರಿಸಿದ್ದರು ನನ್ನನ್ನೊರೆತುಪಡಿಸಿ. ನಿದ್ದೆ ಮನತಟ್ಟುತ್ತಿದ್ದಂತೆ curtain ಸರಿಸಿದೆ ನಾ, ಕಣ್ಣಿನ curtain ಸರಿದಿತ್ತು ಅದೆತಾನು...

ಕಲಕುತುಳುಕುಗಳ ನಡುವೆ ಆಗಾಗ್ಗೆ ನಿದ್ದೆತಪ್ಪುತ್ತಿತ್ತು. ದೇವರೆ! ಸರಿಹೊತ್ತಿನಲ್ಲೂ ಮಾತಾಡುತಿದ್ದಾರೆ ಕೆಲವರು. ಕೊನೆ ಸಾರಿ ಎಚ್ಚರವಾದಾಗ ಬಾನಿನಲ್ಲಿ ಬೆಳಕು ತಿಳಿಯಾಡುತ್ತಿತ್ತು. ಭುವಿಮಯ್ಯಂಕುಡೊಂಕುಗಳು ಕಾಣತೊಡಗಿದ್ದವು ಕಪ್ಪುಬಿಳುಪಿನಲ್ಲಿ. ನಿದ್ದೆಯ ಅಮರು ಓಡಿಹೋಗಿತ್ತು ಸೌಂದರ್ಯಕ್ಕೆ. ಮಲೆನಾಡ ಚೆಲುವು ಎತ್ತೆಚ್ಚಿಸಿಯಾಗಿತ್ತು ನನ್ನ ಪುಟ್ಟ ಚೇತನವ. ಕಣ್ತುಂಬುವಷ್ಟೂ ಸೊಬಗು. ನೀರಲ್ಲಿ ತೇಲುತ್ತಿರುವವನು ಬಾಯಾರಿಕೆ ಎಂಬಂತ್ತಿತ್ತು ಕಣ್ಣಿನ ತೃಷೆ . ಏನೂ ಬೇಡವನ್ನುವಂತ್ತಿತ್ತು ಮನ ಅದೂ ಮುಂಜಾವಿನಲ್ಲಿ! ಮನಸ್ಸಿನಲ್ಲಾವ ಯೋಚನೆಯಿಲ್ಲ, ಬಯಕೆಗಳಿರಲಿಲ್ಲ... ಮಿಂದು ಮೊಲೆಯುಂಡು ಮಲಗಿರುವ ಹಸುಳೆಯ ಮನವಾಗಿತ್ತು ಮನವು ತಾಯಿಯ ಮಡಿಲಿನಲ್ಲಿ.. ಹಕ್ಕಿಗಳೆದ್ದು ತಮ್ ದಿನಚರಿಯಂತೆ ಉಲಿಯುತ್ತಿದ್ದವು ಮಂಗಳವನ್ನ, ಅರುಣನ ದಿನದುದಯಕ್ಕೆ. ಅದೋ ಅವ ಬರುತ್ತಿದ್ದ ಬಿರುಸಿನ ರಥವೇರಿ ಮುಗುಳ್ನಗೆಯೊಂದಿಗೆ ಇಳೆಗೆ ಶುಭಕೋರಿ. ರವಿಕಿರಣಗಳು ಈಜಿಬರುತ್ತಿದ್ದವು ಆಗಸದಿಂದ ಆತುರಾತುರದಲ್ಲಿ. ಮಿಂಚಿ ಸಿಡಿಯುತ್ತಿದ್ದವು ಸ್ಪಟಿಕದಂತ ಎಲೆಇಬ್ಬನಿಗಳಮೇಲೆ ಬಿದ್ದು. ತಂಪರಿಸರದಲ್ಲಿ ಆಗಾಗ ಮುಖವ ಸವರಿಹೋಗುತ್ತಿದ್ದ ರಶ್ಮಿಗಳು ಕೊಡುತ್ತಿದ್ದವು ಕಮ್ಮಗಿನ ಅನುಭವವ. ಬರೆದರೆಂತು..? ಓದಿದರೆಂತು..? ಅದರ ವಿವರಣೆಯನ್ನೀಗ.. ವರ್ಣಿಸಲಾಗದು ಅದರ ಯಥಾವತ್ತು.

ತಲುಪಿದೆವು ಕೊಲ್ಲೂರು. ಅದೇಕೆ ಹೆಸರೋ ಊರಿಗೆ ನಾ ತಿಳಿಯೆ.. ಯಾರನ್ನು ಕೊಲ್ಲುವ ಊರು?! ಒಂದಾನೊಂದು ಕಾಲದಲ್ಲೇನಾದರು ನರಹಿಂಸಕ ರಕ್ಕಸರಿದ್ದರೆ ಇಲ್ಲಿ... ಹೆದರಿ ಸುತ್ತಲಿನ ಪುಕ್ಕಲು ಜನರೇನಾದರು ಕರೆದರೆ ಹೀಗೆ.. ವಿಶ್ಲೇಷಣೆ ನಮಗೇಕೆ ಈಗ? ಮಲೆಗಳ ಒಡಲಿನ ಪುಟ್ಟ ಪುರ ಇದು.. ಇಲ್ಲಿನ ಮೂಕಾಂಬಿಕೆ ಜನಪ್ರಸಿದ್ಧ.. ಅಷ್ಟು ಸಾಕೀಗ. ಅಲ್ಲಿನ ವಸತಿಗೃಹವೊಂದನ್ನೊಕ್ಕಿದೆವು.. ಅಬ್ಬಬ್ಬಾ ತಣ್ಣೀರ ಸ್ನಾನ ಹೊತ್ತಾರೆಯೇ, ಚಳಿಚಳಿ.. ಸುಂದ್ರ, ಅರುಣ, ನಾವೂ ಹೊರಟೆವು ಎಲ್ಲರಂತೆ ಮೂಕೆಯ ಮಂದಿರಕೆ.. ಅಯ್ಯೋ ಅಲ್ಲೊಂದು ಕಡ್ಡಾಯಾ!? ಗಂಡು ಪ್ರಾಣಿಗಳೆಲ್ಲ ಅಂಗಿಬನಿಯಾನುಗಳ ತೆಗೆದು ಅರೆನಗ್ನರಾಗೆ ಪೂಜಾಪ್ರದಕ್ಷಿಣೆ ಮಾಡಬೇಕಂತೆ. ಒಮ್ಮೆ ಶೃಂಗೇರಿಯಲ್ಲಿ ಶಶಾಂಕ ತರಹದ ಸಂಪ್ರದಾಯ ಕುರಿತು ಹೇಳಿದ್ದ ಒಂದೂಹೆಯನ್ನು !?.. ಇದು ಜನಿವಾರದವರನ್ನು ಗುರ್ತಿಸಿ ವಿಶೇಷ ಸತ್ಕರಣೆಮಾಡಲು..!! ನಾ ಉಡುದಾರನೂ ಕಟ್ಟಲ್ಲ ಬಿಡಿ ! ಮೂಕಮರ್ದಿನಿಯ ಪುಟ್ಟ ಮೂರ್ತಿಯ ದರ್ಶನದ ನಂತರ ತಿಂಡಿತಿನ್ನಲು ಹೊರಟೆವು
.

ತಿಂಡಿ ಎಂತದುಂಟು..? only ದೋಸೆ! ಬಗೆಬಗೆಯ.. ಮಸಾಲೆ..ಖಾಲಿ..ಪ್ಲೇನೂ..ಪೇಪರ್ರೂ ಇತ್ಯಾದಿ.. ಇವುನ್ನ ತಿಂದು ಕಾಡುಮೇಡು ಗುಡ್ಡಬೆಟ್ಟಗಳಲ್ಲಿ ತಿರುಗೋದೇ ದಿನಪೂರ್ತೀ.. ನಂತರ ಕೇಳಿದಮೇಲೆ ಅದೃಷ್ಟವೇನೋ ಎಂಬಂತೆ ಉದ್ದಿನೊಡನೆಗಳೂ ಬಿದ್ದವು ತಣಿಗೆಗೆ .. ಎರಡು,ಮೂರು,ನಾಲ್ಕು.. ಹೀಗೆ ಸಾಧ್ಯವಾದಷ್ಟು ಇಳಿಸಿ ಹೊರಬಂದೆವು ಚಾರಣದ ಸಿದ್ದತೆಗೆ. ನಾನು ಅರುಣ, ಊರಬೀದಿಯಲೆಲ್ಲ ತಿರುಗಿ ಗಿರಕಿ ಹೊಡೆದು, ಬಾಯಾರಿಕೆ, ದಣಿವುಗಳ ಮರ್ದನೆಗೆ ನೀರು-ನೀರಣ್ಣುಗಳು ಇರಲಿ ಎಂದು ಖರೀದಿಸಿ ಬ್ಯಾಗ್ ತುಂಬಿಸಿಕೊಂಡೆವು
.

ಸುಮ್ಮನೆ ಕತ್ತೆ ಹೇರು ಬ್ಯಾಗುಗಳ ಹೊರುವುದೇತಕೆ? ಅವಶ್ಯಕವಲ್ಲದವುಗಳನ್ನು ಜೀಪೊಂದಕ್ಕೆ ಟೆಂಟ್ ತಯ್ಯಾರಿ ಸಾಮಾನುಗಳ ಜೊತೆ ತುಂಬಿ, ಪ್ರಮೋದ,ಹರ್ಷ ಇವರೊಂದಿಗೆ ಪೂರ್ವಸಿದ್ಧತೆಗೆ ಕಳುಹಿಸಲಾಯ್ತು. ಉಳಿದ ನಾವೆಲ್ಲರು ನಿತಿನ್(ನಮ್ಬಸ್ಸಿನೆಸರು) ಹೊಕ್ಕೆವು ಲಘು ಬ್ಯಾಗುಗಳೊಡನೆ. ಪ್ಲಾನು, ಬಸ್ಸಲ್ಲಿ trek start point ಗೆ ಹೋಗಿ ಅಲ್ಲಿಂದ ನಡೆಯುವುದೆಂದಾಗಿತ್ತು. ನಮ್ಮ ಉದ್ದನೆಯ ನಿತಿನ್ ಪುಟ್ಟ ತಿರುವುರಸ್ತೆಗಳಲ್ಲಿ ಮರಗಳ ಕೊಂಬೆರೆಂಬೆ‌ಎಲೆಗಳ ಸೀಳುತ್ತ ಹೋಗುತ್ತಿತ್ತು.. ಮಾರ್ಗಮಧ್ಯದ ಕಿರಿದಗಲದ ಜಾಗದಲ್ಲಿ ಖಾಸಗೀ ಮೋಟು ಬಸ್ಸೊಂದು ಎದುರು ಬರುವುದೆ! ಅಲ್ಲಿ ಏಡಿಸಾಹಸಗಳನ್ನು ಮಾಡಿ ಮುಂದುವರಿಯಲು ಬಹಳ ಹೊತ್ತು ಖರ್ಚಾಯಿತು. ಅಲ್ಲೇ ಸ್ವಲ್ಪ ಮುಂದೆ ಸಿಕ್ಕ ಪಾಯಪ್ಪ ಎಂಬುವರನ್ನು ಗೈಡ್ ಮಾಡಿಕೊಂಡು ನಿರ್ಧರಿತ ಜಾಗತಲುಪಿ ಬಸ್ಸಿಳಿದೆವು
.

ಸಣ್ಣಪುಟ್ಟ ಗುಂಪುಗಳಾಗಿ ಗೈಡ್ ನೇತೃತ್ವದ ದಾರಿಯಲ್ಲಿ ಹೊರಟೆವು ... ಕೆಲವರು ಮಾತ್ರ ಎನೆರ್ಜಿಟಿಕ್ಕಾಗಿ ನಡೆಯುತ್ತಿದ್ದರು. ಸ್ವಲ್ಪ ಮಂದಿ ಸೂರ್ಯನ ಸುಡುವಿನ ಭಯಕ್ಕೆ, ಸನ್ ಸ್ಕ್ರೀನ್ ಲೋಶನ್ ಮುಖಕ್ಕೆ ಬಳಿದುಕೊಂಡು ಭೂತಪ್ರೇತಗಳ ಮೋರೆ ಮಾಡಿಕೊಂಡು ನಡೆಯುತ್ತಿದ್ದರು. ಇನ್ನು ಕೆಲವರು ಹಗಲುವೇಷ ತೊಟ್ಟಿದ್ದರು. ಆಶ್ವಿನ್, ಅರಬ್ ಶೈಲಿಯ ಬಿಳಿನೀಲಿ ಚೌಕಗಳ ಬಟ್ಟೆ ಸುತ್ತಿಕೊಂಡು, ಕೈಯಲ್ಲೊಂದು ವಕ್ರ ಊರುಗೋಲನ್ನು ಹಿಡಿದು ಅಫ್ಘಾನಿಯ೦ತೆ ಕಾಣುತ್ತಿದ್ದರು. ಅರುಣ್ ಇಂಗ್ಲಿಷ್ ಟೋಪಿಯನ್ನು ತಲೆಗಿರಿಸಿಕೊಂಡು cow boy ಆಗಿದ್ದ. ಶ್ವೇತೆಯೆಂಬುವಳು ಕಪ್ಪುಬಟ್ಟೆಯನ್ನು ಗೌನಂತೆ ಸುತ್ತಿಕೊಂಡು ಮುಸ್ಲಿಮ್ ಹುಡುಗಿಯಾಗಿದ್ದಳು. ಕವಿತಾ ತಾ ಟೋಪಿ ಹಾಕ್ಕೊಂಡು ಅವಿನಾಶಂಗೆ ಕರ್ಚಿಫ್ ಒ೦ದನ್ನು ಸುತ್ತಿಸಿ ನಡೆದು ಬರುತ್ತಿದರು. ಪ್ರಸನ್ನ ಅವರೊಂದಿಗೆ ಮಾತನಾಡುತ್ತಾ.. ವಿಕ್ರಮ್ ಸೈಮಂಡ್ ಮೋರೆಯಲ್ಲೀ.. ಉಳಿದವರು ತಾವಿದ್ದಹಾಗೆ ನಡೆಯುತ್ತಿದ್ದರು. ಬಿಂದಿಯಾ ನಿ೦ಬೆಹಣ್ಣಿನರ್ಧವೊ೦ದನ್ನು ನೆಕ್ಕುತ್ತಾ ನಡೆಯುತ್ತಿದ್ದಳು.. ಅಬ್ಬಬ್ಬಾ.. ಹುಳಿ. ರಮ್ಯ ಎನೆರ್ಜಿಟಿಕ್ಕಾಗಿ ನಡೆಯುತ್ತ ಹರಟುತ್ತ ಮುಂಚೂಣಿಯಲ್ಲಿ. ಹಂಸ ನಿಧಾನವಾಗಿ
..

ದಾರಿಯಲ್ಲೊಂದು ಶಾಲೆಯುಡುಗರ ಗುಂಪು ತಾವು ಓಡಾಟವಾಡಿಸುವ ಬೈಸಿಕಲ್/ಬೈಕ್ ಟೈರುಗಳನ್ನು ತಲಾ ಹಿಡಿದುಕೊಂಡು ನಮ್ಮ ಪಯಣವನ್ನು ಅಚ್ಚರಿಯಿಂದ ನೋಡುತ್ತಿತ್ತು. ನನಗೇಕೋ ಟೈರ್ ಓಡಾಡಿಸಬೇಕೆನಿಸಿ, ಅವರಲ್ಲೊಬ್ಬನನ್ನು ಬೇಡಿ ಪಡೆದು ಓಡಾಡಿಸಿಯೇಬಿಟ್ಟೆ! ಹಾಗೆಯೇ ಮುಂದೆ ಸೇರಿದೆ, ಗೈಡಿದ್ದ ನಾಲ್ಕುಜನರ ಗುಂಪೊಂದನ್ನು ಐದನೆಯವನಾಗಿ. ಗೈಡ್ ತಮ್ಮ ಪರಿಚಯವನ್ನು ಮಾಡಿಕೊಂಡರು.. ಸುಮಾರು ಇಪ್ಪತ್ತು ವರ್ಷಗಳಿಂದ ಕಾಡ್ಕಾಯುವ ಕೆಲಸ, ಇನ್ನು ಪರ್ಮನೆಂಟ್ ಆಗಿಲ್ವಂತೆ. ಇಬ್ಬರು ಮಕ್ಕಳು, ದೊಡ್ಡವಳಿಗೆ ಮದುವೆಮಾಡಿಯಾಗಿದೆ, ಚಿಕ್ಕವನಿನ್ನೂ ಶಾಲೆಯಲ್ಲೋದುತಿದ್ದಾನೆ. ಕುರ್ಚಿ ಟೇಬಲ್ಲುಗಳೆಣೆಯುವ ಬೆತ್ತದ ಗಿಡ ತೋರಿಸಿದರು. ನಾನಲ್ಲಿಯವರೆಗಂದುಕೊಂಡಿದ್ದು ಅದು ಬಿದಿರಿನ ಹಾಗೆ ಬೆಳೆಯುವಂತಹದೆಂದು. ಅದು ನೋಡಿದರೆ ಮುಳ್ಳುಗಳಿರುವ ಹುಲ್ಲು. ನಾನೋ ಬಯಲುಸೀಮೆಯ ಹುಡುಗ, ಅಷ್ಟಾಗಿ ಕಾಡುಗಿಡಮರಗಳ ಅರಿವಿಲ್ಲ ನನಗೆ. ಅವರೊಂದು ಕಾಡೆಮ್ಮೆಯನ್ನು ರಕ್ಷಿಸಿದ ಅನುಭವವೊಂದನ್ನೇಳಿದರು. ತುಂಬಾ ಸರಳ ಜೀವಿ
.

ನಾವೀಗ ಹೋಗುತ್ತಿದ್ದುದು ಹಿತ್ಲುಮನೆ ಫಾಲ್ಸ್ ನೋಡಲಿಕ್ಕೆ. ನಿರ್ಜನ ಅಡವಿಯಲ್ಲೊಂದು ಮನೆ. ಅಲ್ಲಿ ಮುಂದೆಬಂದವರೆಲ್ಲರು ತಂಗಿ ಹಿಂದೆಬರುತ್ತಿದವರು ಬರಲೆಂದು ಕಾದು ಕುಳಿತರು. ಎಲ್ಲರು ಬಂದುಸೇರಿದ ತದನಂತರವೆ ಹೊರಟೆವು ಜಲಪಾತವನ್ನರಸುತ್ತ ಗದ್ದೆಬದುವಿನ ಮೇಲಿನ ಕಿರುಹಾದಿಯಲ್ಲಿ. ಅಲ್ಲಿನ ಮನೆಯವರು ಕಬ್ಬು, ಭತ್ತಗಳನ್ನು ಬೆಳೆಯುತ್ತಿದುದು ನಾವ್ನೋಡಲೋಗುತ್ತಿದ್ದ ಜಲಪಾತದ ಮುಖೇನ ಬರುತ್ತಿದ್ದ ನೀರಿನಲ್ಲಿಯೇ. ಸಣ್ಣಗೆ ಒಂದು ಬೋರ್ ವೆಲ್ಲಿನಲ್ಲಿ ಬರುವಷ್ಟು ನೀರು ಹರಿಯುತ್ತಿತ್ತು ಹಳ್ಳದಲ್ಲಿ. ಹಳ್ಳದೊಳಗೇ ಕಾಣಿಸುತ್ತಿದ್ದ ಕಾಲ್ದಾರಿಯಲ್ಲಿ ಮುಂದುವರೆದೆವು. ಅಲ್ಲಾಗಲೇ ಬೇರೊಂದೆರಡು ಚಾರಣಗುಂಪುಗಳು ಹೋಗುತ್ತಿದ್ದವು. ಅವರ ಬೆಂಬಿದ್ದು ಹೋದ ಸ್ವಲ್ಪದೂರದಲ್ಲೇ ಕಾಣಬಿತ್ತು ಹನಿಹನಿಗಳ ಫಾಲ್ಸ್. ಅಲ್ಲೆರಡು ಕ್ಷಣ ಕೂತು ಸುಧಾರಿಸಿಕೊ೦ಡು ಹೊರಟೆವು. ಈಗ ಮುಂದಿದ್ದವರು ರಮ್ಯ, ಅರುಣ ಮತ್ತೆ ನಾನು. ತಲುಪಿದೆವು ಫಾಲ್ಸ್ ಅಡಿ. ಕಿಗ್ಗದಬಳಿಯ ಸಿರಿಮನೆ ಫಾಲ್ಸ್ ನೆನಪಾಯಿತು. ತುಂತರು ಜಲಪ್ರೋಕ್ಷಣೆ ಸಿರಿಮನೆ ಚಿಕ್ಕ ಫಾಲ್ಸಿಗಿ೦ತಲೂ ಚಿಕ್ಕದು. ಆದರೆ ಅದಕ್ಕಿಂತ ಎತ್ತರದಿಂದ ಬೀಳುತ್ತಿತ್ತು. ಅದು ಮಧ್ಯಾಹ್ನವಾಗಿದ್ದರೂ ದಟ್ಟಮರಗಳ ನೆರಳಿಂದ, ಪ್ರೊಕ್ಷಣೆಯ ನೀರಿಂದ, ಪರಿಸರ ಮುಂಜಾವಿನಷ್ಟೆ ತಂಪಾಗಿತ್ತು
.

ರವಿಕಿರಣಗಳೇನಾದರು ಫಾಲ್ಸ್ ಮೇಲೆ ಬಿದ್ದಿದ್ದರೆ ಖಂಡಿತವಾಗಿ ಬಣ್ಣಬಣ್ಣದ ನೋಟವಿರುತ್ತಿತ್ತಲ್ಲಿ. ಕಡಿದಾದ ಜಲಪಾತದ ಮೇಲಿಂದ ಕೆಳಗೆ ಯಾವುದೋ ಮರದ ಬೇರುಗಳು ಜೋತುಬಿದ್ದು ಮೆರಗನ್ನು ಕೊಟ್ಟಿದ್ದವಲ್ಲಿ. ಅಲ್ಲಿಬಂದ ಮೊದಲಿಗರ್ಯಾರು ಹನಿಗಳ ನೋಡಲು ಇನ್ನೂ ಮುಂದಾಗಿರಲಿಲ್ಲ. ಅರುಣನಿಗೆ ಮೊಬೈಲ್, ಪರ್ಸ್ ಮತ್ತು ಕಳಚಿಟ್ಟಬಟ್ಟೆಗಳ ನೋಡಿಕೊಳ್ಳಲೇಳಿ ಹೋಗಿ ನಿಂತೇ, ನೀರನಿಗಳಿಗೆ ಬೆನ್ನು ಕೊಟ್ಟು. ಚಟಪಟ ಹನಿಗಳು ಕೊಡುತ್ತಿವೇ ಕಚಗುಳಿ ಜೊತೆಗೆ ಚಟಿಚಟಿ ಸಣ್ಣ ಏಟು. ಖಂಡಿತ ಹೋಗಿರಲೇಬೇಕು ಬೆನ್ನ ಕೊಳೆ. ತಪ್ಪುವುದಲ್ಲ ನನ್ನಮ್ಮನ ಬೈಗುಳ ಒಂದು ಸಲವಾದರೂ. ಕಣ್ಮುಚ್ಚಿ ಮುಖ‌ಎದೆ ನೀಡಿದರೆ ಆಗಲೂ ಕಚಗುಳೀ. ಒಂಥರಾ ಮುದವಾಗಿತ್ತು ಅದು. ಅಲ್ಲಿದ್ದವರಲ್ಲಿ ಅಂಡರ್ವೇರ್ನಲ್ಲಿ ಇಳಿದವನು ನಾನೊಬ್ಬನೆ. ಇಳಿದುಹೋಗಿ ಪಾಂಟ್ಸ್ ಹಾಕಿಕೊಂಡೆ ನಾಚಿಕೆಯಾದಂತಾಗಿ. ನಮ್ಮ ಗುಂಪಿನವರು ಬಂದು ಇಳಿದರು ನೀರಿಗೆ ಒಬ್ಬಬ್ಬರಾಗೆ ಒಂದಿಬ್ಬರನ್ನೊರೆತುಪಡಿಸಿ. ಮೈಯಾರಿದ ನಂತರ ಮತ್ತೊಮ್ಮೆ ಹೋಗಿ ಮೀಯ್ದುಬಂದು ಬಟ್ಟೆಗಳನ್ನು ಹಾಕಿಕೊಂಡೆ. ಫೋಟೊ ಸೆಷನ್ ಕೂಡಾ ನಡೆಯಿತು
!

ಈಗ ನಮ್ಮ ಮುಖ ಕೊಡಚಾದ್ರಿಯೆಡೆಗೆ. ಅಲ್ಲಿಂದಲೇ ಹೋಗಬಹುದಿತ್ತು ಕೊಡಚಾದ್ರಿಯ ಮುಖ್ಯದಾರಿಗೆ. ದಾರಿ ಕೆಲವರಿಗೆ ಕಷ್ಟವೆನಿಸಬಹುದೆಂದು ವಾಪಸ್ಸು ಮನೆಯಡೆಯಲ್ಲಿಗೆ ಬಂದು, ಅಲ್ಲಿ ಅರೆಬರೆಕಟ್ಟಿದ್ದ ತಂಗು ಸೂರಿನಡಿ ಕುಳಿತೆವು. ತಣ್ಣೀರಿನ ಜಳಕ ಹೊಟ್ಟೆಯಲ್ಲಿಯ ಇಲಿಗಳನ್ನು ಕುಣಿವಂತೆ ಮಾಡಿತ್ತು. ತಂದಿದ್ದ ಹಣ್ಣು, ಬಿಸ್ಕೇಟ್ಸ್, ರೊಟ್ಟಿ, ಚಾಕೊಲೇಟ್ಸ್ಗಳನ್ನು ತಿಂದು ಮನೆಯವರಿಂದ ನೀರ್ಕೇಳಿ ಕುಡಿದು ತೇಗಿ ಹೊರಟೋ, ಬ್ಯಾಗುಗಳನ್ನ ಹೆಗಲ್ಗೇರಿಸಿ ಮುಂದಿನ ಗುರಿಯಡೆಗೆ!. ನನಗ್ಯಾಕೋ ಸಪ್ಪೆಯಾಗಿ ಅನಿಸಿತ್ತು ಚಾರಣ. ಕಡಿದೆತ್ತರಗಳನೇರಬಯಸುವ ಉನ್ಮುಖಿ ಆರೋಹಿಗೆ ನೇರ ನೆಲ ಕಾಲ್ದಾರಿಯು ಹೇಗೆ ಕೊಡಬಲ್ಲುದು ಥ್ರಿಲ್. ಮುಂದೆ ಅಶ್ವಿನ್ ಮತ್ತು ಓಂ ಪ್ರಸನ್ನನೊಡನೆ ಸರಸರದ ಅವಸರಮಾಡುತ್ತ ಹೊರಟೆ ನಾ ಹರಟುತ್ತ.. ನಾವು ಮೂರೂ ಜನರೂ ಮಾತಾಡುತ್ತ, ಕೇಕೆಸಿಳ್ಳೆಯಾಡಿ, ಕೂಗುತ್ತಿದ್ದೆವು ಕರೆಯುತ್ತಿದೆವು ಪ್ರತಿದ್ವನಿಗಳ. ಅಶ್ವಿನ್ ದ್ರಾಕ್ಷಿಯಣ್ಣುಗಳನ್ನು ತಂದಿದ್ದು ತುಂಬಾ ಒಳಿತಾಯಿತೆನಿಸಿತು. ಹತ್ತಿಮುಗಿದರೆ ಸಿಗಬಹುದೆಂದುಕೊಂಡು ಹೋದರೆ ಮತ್ತೊಂದು ಮಗದೊ೦ದು ಗುಡ್ಡ.. ಹೀಗೆ ಮೂರ್ನಾಲ್ಕುಗಳನ್ನು ದಾಟಿದ ಬಳಿಕ ರಸ್ತೆಯೊಂದು ಕಾಣಸಿಕ್ಕು, ಅಲ್ಲಿದ್ದ ಕೆಲ ಮಂದಿಯ ನೋಡಿ ಇನ್ನು ಹತ್ತಿರವೇ ಇರಬೇಕು ನಮ್ಮ ಲಕ್ಶ್ಯ ಎಂದು ನಿಟ್ಟುಸಿರು ಬಿಟ್ಟೆವು! ಅಶ್ವಿನ್ ಮತ್ತು ಓಮಿಯ ಮುಖದಲ್ಲಿ ಗೆಲುವಿನ ಮಂದಹಾಸ. ರಸ್ತೆಯಲ್ಲಿ ಸ್ವಲ್ಪ ದೂರ ಕ್ರಮಿಸಿ ಬಲಕ್ಕಿದ್ದ ಗುಡ್ಡದ ನಡುವಿನ ಮೇಲೆ ಚಾರಣಿಸಿದೆವು. ಗುಡ್ಡದ ಮೇಲೆ ಹುಲ್ಲನ್ನು ಬಿಟ್ಟರೆ ದೊಡ್ಡ ಸಸ್ಯಗಳೇ ಇಲ್ಲ. ಯಾಕೆಂದರೆ ಕಲ್ಮಣ್ ಗುಡ್ಡವಲ್ಲ ಅದು; ಕಬ್ಬಿಣದ್ದು! ಹೌದು ಅಲ್ಲಿನ ಬಹುತೇಕ ಗುಡ್ಡಗಳು ಹಾಗೆಯೇ; ಕಬ್ಬಿಣದದಿರಿನ ಕಲ್ಗಳಿನಿಂದಾದುವುಗಳು. ಗಣಿಗಾರಿಕೆಯ ಪ್ರಯತ್ನದ ಕುರುಹುಗಳು ಬೇಕಾದಷ್ಟಿದ್ದೋ. ಗುಡ್ಡವಿಳಿದ ನಂತರ ಮಣ್ ರಸ್ತೆ ಮತ್ತೆ ಸಿಕ್ಕಿ ಹೊರಟೆವು ಸಲೀಸಾಗಿ. ಇದ್ದೆವು ಕೊಡಚಾದ್ರಿಯ ಅಡಿಯಲ್ಲಿ. ಒಂದೆರಡು ಫರ್ಲಾ೦ಗುಗಳ ನಂತರ ಕಂಡಿತು ಪ್ರವಾಸಿ ಮಂದಿರ ಫೋನ್ ಮಾಡಿದರೆ, ಅಲ್ಲಿ ಪೂರ್ವತಯ್ಯಾರಿಗಾಗಿ ಮೊದಲೇ ತೆರಳಿದ್ದ ಹರ್ಷ ಮತ್ತು ಪ್ರಮೋದನಿಗೆ ಕನೆಕ್ಷನ್ ಸಿಗಲಿಲ್ಲ . ಹಿಂದೆಯೇ ಬಂದಿದ್ದ ವಿಶ್ವ. ಪ್ರವಾಸಿಮಂದಿರದ ಬಳಿ ಹೊರಟೊ.. ಸುಮಾರು ಜನರಿದ್ದರು. ಪ್ರಮೋದ, ಹರ್ಷ ಸಿಕ್ಕಿ ಕರೆದೊಯ್ದರು ನಮ್ಮನು ಸ್ವಾಗತಿಸಿ, ಯುದ್ಢಗೆದ್ದು ಬಂದ ವೀರರೆಂದೆಣಿಸಿ! ಒಳಗಡೆ ಮಂದಲಿಗೆಗಳನ್ನಾಸಿದ್ದರು. ಹೋಗಿ ದಣಿವಾರಿಸುತ್ತ ಕುಳಿತೆವು, ಪಯಣದ ಸುಖದುಃಖ ಮಾತಾಡುತ್ತ.. ಅಲ್ಲೊಂದಷ್ಟು ಎಳನೀರ ಬಾಟೆಲ್ಗಳಿದ್ದವು. ತೂತುಮಾಡಿ ಒಂದನು ಕುಡಿದರೆ ಜ್ವರಬಂದಾಗ ನೀರ್ರುಚಿಸುವ ಹಾಗಿತ್ತು ಪೇಯ. ಥೂ, ನಾವ್ಯಾರೂ ಕುಡಿಯಲಿಲ್ಲ ಅವನ್ನ. ಸ್ವಲ್ಪ ವಿಶ್ರಾಂತಿಯ ನಂತರ ಸ್ನಾನ ಮುಗಿಸಿದೆವು. ಅಲ್ಲಿದ್ದ ಸ್ನಾನಕೋಣೆಯ ಬಾಗಿಲನ್ನು ಒಳಗಿನಿಂದ ತೆಗೆಯಲಾಗುತ್ತಿರಲಿಲ್ಲ ; ಯಾರಾದರು ಒದೆಯಬೇಕಿತ್ತು ಹೊರಗಿನಿಂದ
.

ನನ್ನೊರೆತುಪಡಿಸಿ ಎಲ್ಲರೂ ಸೂರ್ಯಾಸ್ತಮಾನ ನೋಡಲು ಅಲ್ಲಿದ್ದ ವಿಶೇಷ ಗುರ್ತು ಸ್ಥಳಕ್ಕೆ ಹೋದರು. ದಣಿವಾರಿತ್ತು ನನಗೆ. ನಾನೊಬ್ಬನೆ ಅಲ್ಲೇ ಸ್ವಲ್ಪದೂರಿದ್ದ ಕಡಿದಾದ ಜನನಿಬಿಡ ಜಾಗದಲ್ಲಿ ಹೋಗಿ ಕುಳಿತೆ. ಧರೆಗೆ ನಿರತ ಶಕ್ತಿ, ಬೆಳಕನೀವ ಕಾಯಕದಲ್ಲಿ ತ್ರಾಸಗೊಂಡು ಚೆಂಡು ಹೂವಿನ ಕೆಂಪಗಾಗಿದ್ದ ಅವ ಹೋಗುತ್ತಿದ್ದ ಸೇರಲು ಛಾಯೆಯ ಮಡಿಲ. ಕೆಂಬಣ್ಣದ ಮೋಡಸಾಲು ಪುಷ್ಪಮಾಲೆಗಳಂದದಿದ್ದವು ಅವಗೆ. ಮಿಗಖಗಗಳು ಗೂಡುಸೇರುತ್ತಿದ್ದವು ಹೊಟ್ಟೆತುಂಬಿಸಿಕೊಂಡು ನಲಿಯುತ್ತಾ. ನಿಶ್ಚಲ ನೀರವದಲ್ಲಿ ಮನಸ್ಸಿಳಿದೆಯ ನೀನು
.

ಇರಬಾರದಿತ್ತೆ ನೀ ಜೊತೆ ಹೊಂಬಣ್ಣದೊತ್ತಿನಲ್ಲಿ
.
ಬರಲಾರೆಯ ನೀ; ಕ್ರಂದುಸುತಿಹೆ ನಿನ್ನೊಲುಮೆಯರಮನೆಯರಸಿ
..
ಹೇ ಮಾಧುರಿ, ಹಿತಭಾಷಿಣೀ ಕೇಳಿಸೆಯ ನಿನ್ನಿಂಪಾದ ಚೈತ್ರಪಕ್ಷಿಯ ಗಾನದಂತ ದನಿ
,
ರಾತ್ರಿಯಾಗಸದಲಿ ತಾರೆತೋಟದ ಚುಕ್ಕಿಯೆಣಿಸುವಾಸೆ ನಿನ್ನೊಡಗೂಡಿ ಮಹಡಿಯ ಮೇಲೆ
.

ಕಳವಾರವ ಬೆಳದಿಂಗಳಲೊಮ್ಮೇರಿ ಆಡುವಾಸೆ ನಸುಹೊತ್ತಿನ ಮೋಡಗಳೊಡನೆ ನಿನ್ನೊಳಗೂಡಿ
.
ಆಡುವ ಎನಿಸಿದೆ ಕಾಮನ ಬಿಲ್ಲಿನ ಮೇಲೆ ಜೋಕಾಲಿ
.
ಹೇ ಸುನಯನೇ, ನಿನ್ಕಣ್‌ಗಳ್ ಅವೆಷ್ಟು ತಂಪು, ದೃಷ್ಟಿ ತಾಗದಿರಲಿ ಅಂದಕೆ

ಎಂದಿವೆ ಕಣ್ಗಳಲಿ ಚುಕ್ಕಿಗಳು.

ಭಾವಕೀ, ಮಧುರೇ.. ನಿನ್ನಿಂಪ ತಂಪಿತ್ತು ಪರಿಹರಿಸೆ ಬೇಗೆಯನು
.
ಹೇ ಹೇಮೆ, ಬಂಗಾರದೊಡವೆ ಹಿಗ್ಗುವುವು ನಿನ್ ಮೈಕಾಂತಿಯಲ್ಲಿ

ಕಾಡಲೆದು ತರುವೆ ನಿನ್ನ ಕೇಶಕೆ ತಾಳೆಗರಿಯ ಹೂ, ಬಾರೆ ಸುಕೇಶಿನಿ.

ತೊಂಡೆವಣ್ದುಟಿಯ, ಬೆಣ್ಗೆನ್ನೆಯ, ಸಂಪಿಗೆ ನಾಸಿಕದ, ರಸತುಂಬಿದ ಲತೆಮಯ್ಯ ನೀರೆ

ನಿನ್ನ ಧ್ಯಾನ ಸಾಕಾಗಿದೆ ಬಾರೆ ಇನ್ನು ನಿಜಲೋಕಕೆ.

ಹಗಲುಗನಸಿನೊರಗೆಬಂದು ಎಲ್ಲಿದ್ದಾರೆ ಉಳಿದ ಮಂದಿ ನೋಡೋಣೆಂದು ಹಾಗೆಯೇ ತುಸು ಕೆಳಗೆ ನಡೆದು ಹೋದೆ.. ಅಲ್ಲಿ ತಿರುವಿನಲ್ಲಿ ಯಾರೋ ಚಾರಣಿಗರು ಸೌದೆಬೆಂಕಿಯಲ್ಲಿ ಅಡುಗೆ ಮಾಡುತ್ತ ಮಾತಾಡುತಿದ್ದರು. ಮತ್ತೊಮ್ಮೆ ಇಂತಕಡೆ ಬಂದಾಗ ನಮ್ಮ 'ಹೆಜ್ಜೆ'ಯಿಂದಲೂ ಇಂತಹದೊಂದು ಆಗಬೇಕು ಎನಿಸಿತು. ಕೊಂಚದೂರದಲ್ಲಿ ಟಾರ್ಚ್ ಬೆಳಕು ಕಾಣಿಸಿತು, ಮುಂದೆ ನಡೆದೆ, ಅವರು ನಮ್ಮವರೇ ಆಗಿದ್ದರು. ಮಾತನಾಡುತ್ತ ಮೇಲಕ್ಕೆ ಬಂದೆವು
.

ಬಂದವರಲ್ಲಿ ಉಸ್ಸೆಂದು ಕುಳಿತರು ಕೆಲವರು.. ಕಾಲ್ಚಾಚಿ ಬಿದ್ದುಕೊಂಡರು ಉಳಿದವರು. ಪಕ್ಕದ ಕಟ್ಟಡದಲ್ಲಿ ಊಟ ತಯ್ಯಾರಾಗುತ್ತಿತ್ತು. ಕೆಲವರು ಈಗಲೇ ಮರಳಬೇಕಾಗಿದೆ ಎಂದು ಹೇಳಿದಾಗ, ಬೆಳಿಗ್ಗೆ ಉದಯರವಿಯನ್ನು ನೋಡಿಯೇ ಹೋಗುವುದು ಎಂದುಕೊಂಡಿದ್ದ ಗುಂಪು ಬೇಸರಗೊಂಡಿತು . ನನಗೆ ಇದು ಮೊದಲು ಅನ್ಯಾಯವೆನಿಸಿದರು ನಂತರ ಒಳಿತೆನಿಸಿತು, ಇರುವುದು ಒಂದೇ ಶೌಚ-ಸ್ನಾನಗೃಹ, ಇಷ್ಟೊಂದು ಮಂದಿಯ ಸಲುಹಲಾಗದದಕೆ ಎಂದು ಅರಿತನಂತರ. ಹಾಗೆಯೇ ಮಾತನಾಡುತ್ತ.. ಹಾಡುಕೇಳುತ್ತ.. ಸಮಯಕೊಲ್ಲುತ್ತಿದ್ದೆವು ಊಟದ ಕೂಗಿನ ಬರುವಿಕೆಗಾಗಿ
.

ಊಟ ರೆಡಿ ಎಂದು ಕೇಳಿದೊಡನೆ ತಾಮುಂದು ನಾಮುಂದು ಎಂದು ಹೋಗಿನಿಂತು ಮಾಡಿದ್ದ ಅನ್ನ-ನೀರ್ಸಾರನ್ನು ಕಬಳಿಸಿದೆವು. ಊಟವಾದನಂತರ ಎಲ್ಲಾ ಹೆಣ್ಜೀವಿಗಳು.. ಕೆಲವು ಗಂಡ್ಪ್ರಾಣಿಗಳು ಕೊಲ್ಲೂರಿಗೆ ಹೊರಟವು. ಉಳಿದ ನಾವುಗಳು ಬೇಗ ಏಳುವುದು ರವಿಯುದಯ ನೋಡಲು ಎಂದು ಬಿದ್ದುಕೊಂಡೆವು. ರಾತ್ರಿಯೆಲ್ಲ ಮಾತೂ.. ಕೂಗಾಟ.. ಪಕ್ಕದ ಕೋಣೆಯಿಂದ. ನಿದ್ದೆ ಆಗಾಗ ಕೆಡುತ್ತಿತ್ತು
.

ಬೆಳಗ್ಗೆ ಐದಕ್ಕೇ ಎಚ್ಚರವಾಯ್ತೆನಗೆ. ಅಲ್ಲಿ ಕರೆಂಟನ್ನು ಜನರೇಟರ್ನಿಂದ ಕೊಡಲಾಗುತ್ತಿತ್ತು. ಇನ್ನೂ ಜನರೇಟರ್ ಆನ್ ಮಾಡಿರಲಿಲ್ಲ, ಮೊಬೈಲ್ ಬೆಳಕಿನಲ್ಲೇ ಸ್ನಾನವನ್ನು ಮುಗಿಸಿದೆ ನೀರ್ಗಲ್ಲಿನಿಂದ ಬಂದಂತ್ತಿದ್ದ ಕೊರೆವ ನೀರಲ್ಲಿ. ಶುಭ್ರತೆ ಬೇಡವೇ ದಿಗ್ದರ್ಶನಕೆ. ನನ್ಬಳಿಕ ರಾಜಣ್ಣ... ಉಳಿದವರು ಇನ್ನೂ ಏಳುವುದರಲ್ಲಿದ್ದರು. ನಾನು ರಾಜಣ್ಣ ಮತ್ತು ದೇಸಾಯಿ ದೌಡಾಯಿಸಿದೆವು ಪೂರ್ವದೆಡೆಗೆ ನಸುಗತ್ತಲಿನಲ್ಲೇ... ಮುಳ್ಗಿಡಗಳ ಸರಿಸುತ್ತ ಏರುಮುಖದ ಕಾಲ್ದಾರಿಯಲ್ಲಿ. ಸ್ವಲ್ಪಜನ ಬಂದು ಸೇರಿದ್ದರು ಅದಾಗಲೇ. ಬಲಬದಿಯ ಗುಡ್ಡವೇರುತ್ತಿದ್ದರು ಕೆಲಮಂದಿ. ಎಡಬದಿಯ ಗುಡ್ಡವನ್ನೇರಿದೆವು. ಅಲ್ಲಿಯೂ ಸ್ವಲ್ಪಮಂದಿಯಿದ್ದರು. ನಸುಬೆಳಕಾಗಿದೆ ಅವ ಇನ್ನೂ ಕಾಣಿಸುತ್ತಿಲ್ಲ. ಅವಿತುಕುಳಿತ್ತಿದ್ದಾನಲ್ಲ ಎಂದರು ರಾಜಣ್ಣ
.

ನಾವೀಗಿದ್ದದ್ದು ಪ್ರದೇಶದ ಎತ್ತರದ ಗುಡ್ಡ. ಸುತ್ತಲಿನ ಮಲೆಕಾಡು ಮಂಜುಮಸುಕಿನಲ್ಲೂ ಭವ್ಯವಾಗಿಯೇ ಗೋಚರಿಸುತ್ತಿತ್ತು. ಉತ್ತರಕ್ಕಿದ್ದ ಆಣೆಕಟ್ಟೆಯ ನೀರಿನ ಮೇಲೆ ಮೋಡಗಳು ಮಲಗಿರುವ ಹಾಗೆ ಭಾಸಮಾಡಿತ್ತು ಅಲ್ಲಿದ್ದ ಕವಳ. ದೂರದಲ್ಲಿ ನವಿಲೊಂದು ಕೂಗುತ್ತಿತ್ತು ಗರಿಗೆದರಿ ಕುಣಿಯುತ್ತಲೇನೋ. ಖಗಗಳ ಇನಿಯಿಂಚರ ಶುರುವಾಗಿತ್ತು. ಮೂಡುತ್ತಿದ್ದಾ ಬಾಲರವಿ. ಜಗವೆಲ್ಲಾ ಆನಂದಮಯ ಹುಟ್ಟಿನಲ್ಲಿ. ಅದೇಕೋ ಈವತ್ತು ಹಣೆಯ ಮೇಲಿನ ಸಿಂಧೂರದಂತೆ ಕಂಡ.

ಮತ್ತೆ ಬಂದೆಯಾ ನೀ ಸ್ಮೃತಿಗೆ. ಇರದೆಹೋದೆಯಲ್ಲ ಜೊತೇ..
ಸಾಧ್ಯವಾಗುವುದಾಗಿದ್ದರೆ ಅವನನ್ನು ಜೋಪಾನವಾಗಿತಂದು ನಿನ್ನಣೆಗಿಡುತ್ತಿದ್ದೆ , ತೇಜನಾಣೆ, .. ಮಂದಸ್ಮಿತೆ
.
ಬಿಸಿಲಿನುರಿಗೆ ಬೆಂದ ಭೂಮಿ ಮುಂಗಾರಿಗರಸುವಂತೆ
..
ನೀರಾಳಕೆ ಮುಳುಗಿದವನು ಉಸಿರಾಡಲು ಪರಿದಾಡುವಂತೆ ಅರಸಿಹೆನು ನಾನಿನ್ನ
...
ಬಾ ಬೇಗ ನನ್ನೀ ಶೂನ್ಯವನು ಪೂರ್ಣಗೈ
.

ಸೇರುವ ತವಕದಲಿ ಸೃಷ್ಟಿಯೇ ಅನುರಕ್ತ, ಬಾ ಸೇರು.. ಮುಕ್ತಿಯೆಡೆಗೊಯ್ಯಲಲ್ಲವೇ ಮಿಲನವಿರುವುದು
.
ಹೇ ಸತಿ ಯೋಗ್ಯಳೇ.. ನಾ ಹಾಲು, ನೀ ಜೇನು; ಸೇರಿದರೆ ಆಗುವಿದಿಲ್ಲವೇ ಸವಿ, ಸುರಲೋಕಪಾನಕ್ಕಿಂತ ಮಿಗಿಲು
.
ಸೇರಿಸವಿದು ನಲಿವುದಲ್ಲವೇ ಸೃಷ್ಟಿಮಾಯೆಯಸಾಲು
.

ಬಾಳ ಚಾರಣದ ಏರಿಳಿತಗಳಲ್ಲಿ ಸಾಗೋಣ ಜತೆಗೂಡಿ, ಅವು ಹಿಮಪುಷ್ಪಗಿರಿಗಳಂತಿದ್ದರೂ
..
ನಿಚ್ಚಹರಿದ್ಗಿರಿಗಳಂತಿದ್ದರೂ..ಮುಳ್ಕಲ್ಲುಗಳ ಗುಡ್ಡಗಳಂತಿದ್ದರೂ
..
ಹೇ ವನಿತೇ ನಿನ್ನ ನನ್ನೊಳು ಭೋಗವೇ ತ್ಯಾಗ.. ಮೋಹವೇ ಭಕ್ತಿ.. ಪ್ರೇಮವೇ ಮುಕ್ತಿಯಲ್ಲವೆ
.

ಕೊಡಚಾದ್ರಿಗೆ ಏರಿಬಂದದ್ದು ಸಾರ್ಥಕವಾಯಿತು ಎನಿಸಿ ಹರ್ಷಚಿತ್ತದೊಡನೆ ಇಳಿಯತೊಡಗಿದೆವು. ಎದುರಿದ್ದ ಗುಡ್ಡದ ಬುಡದಲ್ಲಿ ನಮ್ಮುಳಿದುಡುಗರು ಪ್ರಕೃತಿಯ ರಮಣೀಯತೆಯನ್ನು ನೋಡತೊಡಗಿದ್ದರು. ಅವರ ಬಳಿಸೇರಿದ ಬಳಿಕ, ಅಲ್ಲಿ ಒಂದೆರಡು ಕ್ಷಣವುಳಿದುಜೋತೆಗೂಡಿ ಪ್ರವಾಸಿ ಮಂದಿರಕೆ ಹೊರಟೆವು . ಟೀ ಕುಡಿದು ಗುಂಪಲ್ಲಿ ಒಂದೆರಡು ಫೋಟೊ ಕ್ಲಿಕ್ಕಿಸಿಕೊಂಡೆವು. ಒಳಗಿದ್ದ ಸರಕುಗಳನ್ನು ಹೊರತಂದಿಟ್ಟು ಬಾಡಿಗೆ ಪಾವತಿಸಿದೆವು. ಆಗತಾನೆ ನಮಗಾಗಿ ಬಂದ ಜೀಪಿಗೆ ಸಾಮಾನು ತುಂಬಿದೆವು. ಕೂರಲು ಜಾಗ ಸಾಲದ್ದರಿಂದ ಸಾಮಾನುಗಳ ಜೊತೆಯಲ್ಲೇ ಪ್ಯಾಕ್ ಆದೆವು ನಾನು, ಸುಂದ್ರ, ರಾಜಣ್ಣ, ವಿಶ್ವ ಹಿಂದೆ. ಉಳಿದವರು ಮುಂದೆ. ಹೊರಟಿತು ನಮ್ಮ Packers and Movers ಗಾಡಿ
.

ಕಲ್ಲುಮಣ್ಣು ಗುಂಡಿಗುದ್ರಗಳ ತಿರಿವುಮುರುವುಗಳ ರಸ್ತೆಯೆನ್ನಲಾಗದ ಅಗಲ ದಾರಿಯದು. ಜೀಪರಿಯುತ್ತಿತ್ತು ತುಳುಕುತ್ತ ಬಳುಕುತ್ತ ನಮ್ಮನ್ನೊತ್ತು. ಥ್ರಿಲ್ಲಿಂಗ್ ಪಯಣ. ಹೊಗಳಲೇ ಬೇಕು ಅಲ್ಲಿನ ಡ್ರೈವರ್ರುಗಳ ಕುಶಲತೆಯ, ಹೊಗಳಿದೆವು ಕೂಡ. ರಾತ್ರಿ ನಮ್ಮವರ ಕರೆದೊಯ್ದವರಲ್ಲಿ ಅವನೂ ಅಂತೆ. ವಾಂತಿ ವಾಕರಿಕೆಗಳು ಸಾರ್ ಎಂದೇಳಿದ ಕತೆಯ. ಕೆಳಗಿದ್ದ ನಿತಿನ್ ಬಳಿಸೇರಲು ಸುಮಾರು ಒಂದು ಗಂಟೆಯೇ ಹಿಡಿದ್ದಿತ್ತು. ಜೀಪ್ನಿಂದ ಬಸ್ಸಿಗೆ ಸಾಮಾನುಗಳ ಸಾಗಿಸಿ, ಫೋಟೊ ತೆಗೆಸಿಕೊಂಡೆವು ಜೀಪ್ಮುಂದೆ ನಿಂತು. ಬಸ್ಸೊರಟಿತು ಕೊಲ್ಲೂರಿಗೆ
.

ಕೊಲ್ಲೂರಲ್ಲಿ ತಿಂಡಿತೀರ್ಥಗಳ ಮುಗಿಸಿ ರಾತ್ರಿಬಂದವರ ಒಡಗೂಡಿ ಬಸ್ಸತ್ತಿದೆವು ಮರಳಲು ಬೆಂಗಳೂರಿಗೆ. ಅವತ್ತು ಜೋಗಕ್ಕೋಗುವ ಇರಾದೆಯಿದ್ದರೂ ಸಮಯದಭಾವವರಿತು ಕೈಬಿಟ್ಟಿದ್ದಾಗಿತ್ತು
. .

ಬಹುತೇಕರು ಹಿಂದಿನ ದಿನವೆಲ್ಲ ಆಯಾಸಗೊಳ್ಳುವಷ್ಟು ನಡೆದಿದ್ದರೂ ಇಂದು ಉಲ್ಲಾಸಮಯರಾಗಿ ಕಂಡುಬಂದರು. ಗಾನ ಗಾನಾ..ಬಜಾನ,ನಾಚನಗಳೊಂದಿಗೆ ಹಿಂಪ್ರಯಾಣ ಸಾಗಿತ್ತು. ಅರುಣ್ ಪ್ರಸನ್ನ ಸೇರಿ ಗಿಟಾರ್ ಹಿಡಿದು ತಮ್ಗ್ತಿಳಿದ ಸಂಗೀತ ಪಾಡುತ್ತಿದ್ದರು. ರಾಜಣ್ಣ ಎಂದಿನಂತೆಯೇ ಮುಂಗಾರುಮಳೆಯ ಗಣೇಶಣ್ಣ.. ನಂತರ CDಗಳನ್ನು ಹಾಕಿ ಕುಣಿಯತೊಡಗಿದರು ಪಾರ್ಟಿ ಅನಿಮಲ್ಸ್ . ಜೋಷಿ ಬಯ್ಯಾ, ಪ್ರಸನ್ನ, ರವಿ, ರಮ್ಯ, ಹರ್ಷ, ಶ್ವೇತ... ಕವಿತವಿನಾಶರನ್ನು ಬಲವಂತಮಾಡಿ , ನಮ್ಮನ್ ಬಿಟ್ಬಿಡಬೇಕು ನಾವು Senior citizens ಇಲ್ಲಿ... ಎಂದು ಗೋಗರೆದರೂ ಬಿಡದೆ ಕುಣಿಸಿಯೇಬಿಟ್ಟರು,ಬಹೊತ್ ಹೀ ಝಿದ್ದಿ ಹೆ ಲೋಗ್ . ಪಾಪ ಅವಿನಾಶ್, ಚಾರಣದಲ್ಲೆಲ್ಲಾ ಬೀಳುತ್ತ ಏಳುತ್ತ ಜಾರುತ್ತ ನಡೆದಿದ್ದ. ಕೈಹಿಡಿದು ನಡೆಸಿದ್ದಳು ಕವಿತ. ಅವನಿಗೆಲ್ಲೂ ಬೀಳುವ ಭಯಬೇಡ ಬಿಡಿ.ಅವನಿಗೆ ಕೈನೀಡಿರುವಳು ಛಲಗಾತಿ, ಹಿಡಿದಕಾರ್ಯ ಬಿಡದೆ ನಡೆಸುವ sticky, organised ಹೆಣ್ಣು. ರಮ್ಯ ಸತ್ಯಬಾಮೆಯಾಗಿ ನರ್ತಿಸಿದ್ದೇ ನರ್ತಿಸಿದ್ದು, ಚಾರಣದ ಪೂರಾ ತುಂಬಾ ಎನೆರ್ಜಿಟಿಕ್ಕಾಗಿ ಓಡಾಡಿಕೊಂಡಿದ್ದವಳು. ಶ್ವೇತ, ಲೈಫ್ ಸೆಲೆಬ್ರೇಟಿಂಗ್ ಕೃಷ್ಣಸುಂದರಿ ಮೋಹಕ ನೃತ್ಯದಲ್ಲಿ.. ಹಂಸ ಸುಮ್ಮನೆ ಪ್ರೇಕ್ಷಕಿಯಾಗಿ, ಓಡಾಟದ ಸುಸ್ತಿದ್ದರು ಆಟವಾಡಿದ ಮಂದಹಾಸದ ಮುಖದಲ್ಲಿ ನೋಡುತ್ತ ಕುಳಿತಿದ್ದಳು. ಬಿಂದಿಯಾ ಕುಳಿತಿದ್ದಳು ಹಾಗೇ ಸುಮ್ಮನೆ... ಚಾರಣದಲೆಲ್ಲಾ ಉಳಿದವರಂತೆಚ್ಚು ಸಹಾಯ ಪಡೆಯದೆ ನಡೆದು ಬಂದಾಕೆ..ದಿಟ್ಟೆ, ಗಂಭೀರೆ. cute boy ಹರ್ಷ.. ನಾಚನಾ ಕ್ಯಾ, ನಚಾನಾ ಭೀ ಮಾಡುತ್ತಿದ್ದ. ರಾಜಣ್ಣ ಹಂಗೊಂದ್ ನಿಮಿಷ ಸ್ಟೆಪ್ಸ್ ಹಾಕಿ ಮಲ್ಟಿಟ್ಯಾಲೆಂಟ್ ಆಗಿಹೋಗಿದ್ದರು. ರವಿ, ಇನಿಶಿಯೇಟಿವ್ ತೆಗೆದುಕೊಳ್ಳುವ ಯಂಗ್ ಅಂಡ್ ಎನರ್ಜಿಟಿಕ್ ವ್ಯಕ್ತಿತ್ವದವ..ಕ್ರಿಯೇಟಿವ್.. ಅವನೂ ಕೂಡ ಡಿಸೆಂಟ್ ಸ್ಟೆಪ್ಸ್ ಗಳಲ್ಲಿ. ಜೋಷಿ ಮಾಡಿದ್ದೇ ಮಾಡಿದ್ದು ಜೋಶಲ್ಲಿ ಡ್ಯಾನ್ಸ್, ಕೇಳುವ ಮುನ್ನವೇ ಸಹಾಯ ಮಾಡುವ ಗುಣವುಳ್ಳವರು. ಇನ್ನು ಮ.ನ.ಮೋಹನ ಸುಮ್ಮನೆ ಮಜಾ ನೋಡುತ್ತಲಿದ್ದ, ಡಿಪ್ಲೊಮಾಟಿಕ್ ಹುಡುಗ. ಓಂ ಪ್ರಸನ್ನ ಕೂಡ ಸುಮ್ಮನಿದ್ದ, ಸಾಧು ಜೀವ . ಪ್ರಕಾಶ್ ದಿ ಜಾಲಿ ಬಾಯ್ ಕೂಡ ಡಾನ್ಸಿಂಗ್... ವಿಶ್ವ, ಸೂರಿ, ವಿಕ್ರಮ್ ಮೊದಲಾದವರೆಲ್ಲ ಸುಮ್ಮನೆ ಕುಳಿತಿದ್ದರು ಸ್ವಭಾವತಃ . ಇನ್ನು ಸ್ಟಂಟ್ ಸಾಹಸಿಗ ಸುಂದ್ರ, ಸಜೀತ್... ಇವರೂ ಹಾಕುತ್ತಿದ್ದರು ತಾಳಕ್ಕೆ ಹೆಜ್ಜೆಗಳ. ಸುಸ್ತಾದಮೇಲೆ ಸುಮ್ಮನಾಗಿ ಸೀಟೊರಗಿದ್ದರು ಎಲ್ಲರೂ ಊರು ನೆನೆಯುತ..
ಬೆಂಗಳೂರು ತಲುಪಿದಾಗ ರಾತ್ರಿ ಹನ್ನೆರಡಾಗಿತ್ತು.

--ರಮೇಶ ಬಿ ವಿ